ಅಕ್ರಮನಿರ್ಬಂಧ

	ಒಬ್ಬ ವ್ಯಕ್ತಿಯು ತನಗಿರುವ ಒಂದು ಹಕ್ಕಿನ ಪ್ರಕಾರ ತನಗೆ ಇಷ್ಟಬಂದ ದಿಕ್ಕಿನಲ್ಲಿ ಹೋಗದಿರುವಂತೆ ಉದ್ದೇಶಪೂರ್ವಕವಾಗಿ ಅವನನ್ನು ತಡೆಹಿಡಿಯುವುದಕ್ಕೆ ಈ ಹೆಸರಿದೆ. ಇದನ್ನು ಇಂಡಿಯನ್ ಪೀನಲ್ ಕೋಡ್ 339ನೆಯ ಕಾಲಂನಲ್ಲಿ ಹೇಳಲಾಗಿದೆ.

	ತನಗಿಷ್ಟ ಬಂದ ಕಡೆ ಹೋಗುವ ಹಕ್ಕು ವ್ಯಕ್ತಿಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ಬೇರೆಯವರ ಮನೆಗೆ ಅಕ್ರಮವಾಗಿ ಪ್ರವೇಶಿಸುವುದು, ಇತರರ ಆಸ್ತಿವ್ಯವಹಾರಗಳಲ್ಲಿ ಪ್ರವೇಶಿಸುವುದು-ಇತ್ಯಾದಿ ವ್ಯಕ್ತಿಸ್ವಾತಂತ್ರ್ಯವಲ್ಲ. ಯಾವ ಕಡೆಗೆ ಎಡೆಗೆ ಹೋಗುವ ಹಕ್ಕಿದೆಯೋ ಅಂಥ ಕಡೆ ಹೋಗುವ ಸ್ವಾತಂತ್ರ್ಯ ಎಲ್ಲ ವ್ಯಕ್ತಿಗಳಿಗೂ ಉಂಟು. ಅದನ್ನು ನಿರೋಧಿಸುವುದು ಅಕ್ರಮನಿರ್ಬಂಧ.

	ಆದರೆ ಎಲ್ಲ ನಿರ್ಬಂಧವೂ ಅಕ್ರಮವೆನಿಸುವುದಿಲ್ಲ. ಅವುಗಳಿಗೆ ನಿರ್ದಿಷ್ಟ ನಿಯಮಗಳಿರುತ್ತವೆ. ನೆಲದ ಮೇಲೆ ಅಥವಾ ನೀರಿನ ಮೇಲೆ ಹಾದುಹೋಗುವ ಖಾಸಗಿ ದಾರಿಹಕ್ಕನ್ನು ಹೊಂದಿದವನೊಬ್ಬನು ತನಗೊಬ್ಬನಿಗೆ ಆ ದಾರಿಯಲ್ಲಿ ಓಡಾಡುವ ಸಂಪೂರ್ಣ ಹಕ್ಕಿದೆಯೆಂದು ತಿಳಿದು, ಇತರರು ಆ ದಾರಿಯಲ್ಲಿ ಹೋಗದಂತೆ ನಿರ್ಬಂಧಪಡಿಸಿದರೆ ಆಗ ಅದು ಅಕ್ರಮನಿರ್ಬಂಧ ಎನಿಸುವುದಿಲ್ಲ. ಏಕೆಂದರೆ, ಅಡ್ಡಿಪಡಿಸಿದಾತನಿಗಿರುವ ನ್ಯಾಯಸಮ್ಮತವಾದ ಹಕ್ಕಿನ ಪ್ರಕಾರ, ಇತರರಿಗೆ ಆ ದಾರಿಯಲ್ಲಿ ಓಡಾಡುವ ಹಕ್ಕು ಇರುವುದಿಲ್ಲ. ಒಂದು ವೇಳೆ ಅಡ್ಡಗಟ್ಟಿದವನು ದಾರಿಹೋಕನ ಹಕ್ಕನ್ನು ಅಡ್ಡಪಡಿಸಿದ್ದರಿಂದ ಉದ್ಭವಗೊಂಡ ವಿವಾದವನ್ನು ಸಿವಿಲ್ ನ್ಯಾಯಾಲಯಗಳಲ್ಲಿ ಬಗೆಹರಿಸಿಕೊಳ್ಳಬೇಕು. ಅದು ಕ್ರಿಮಿನಲ್ ಮೊಕದ್ದಮೆಯಾಗುವುದಿಲ್ಲ.

	ಒಬ್ಬನನ್ನು ಒಂದು ಕೋಣೆಯಲ್ಲೋ ಮನೆಯಲ್ಲೋ ಕೂಡಿಹಾಕಿ ಹೊರಗೆ ಬರದಂತೆ ಆತನನ್ನು ನಿರ್ಬಂಧಿಸುವುದಾಗಲಿ, ಯಜಮಾನನು ತನ್ನ ಮನೆಯೊಳಕ್ಕೆ ಹೋಗದಂತೆ ಬಾಗಿಲನ್ನು ಭದ್ರಪಡಿಸಿ ಅಥವಾ ನಿರ್ಬಂಧಿಸುವುದು ನಿಸ್ಸಂಶಯವಾಗಿ ಅಕ್ರಮ ನಿರ್ಬಂಧವಾಗುತ್ತದೆ. ಆದರೆ, ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ಕಲ್ಲನ್ನೋ ಮರದ ದಿಮ್ಮಿಗಳನ್ನೋ ಇಟ್ಟು ಗುಳಿ ತೋಡಿದರೆ ಇದು ಅಕ್ರಮ ನಿರ್ಬಂಧವಾಗುವುದೋ? ದಾರಿಹೋಕನಿಗೆ ಆತ ಮುಂದಕ್ಕೆ ಹೋಗಲು ಅದು ಅಡ್ಡಿಯಾಗಿದೆಯೇ ಹೊರತು, ಹಿಂತಿರುಗಿ ಹೋಗಲು ಎಡಬಲಗಳಿಗೆ ಸರಿದುಹೋಗಲು ಯಾವ ಅಡ್ಡಿಯೂ ಇರುವುದಿಲ್ಲವಲ್ಲ - ಎಂದು ವಾದಿಸಿ ಇದು ಅಕ್ರಮನಿರ್ಬಂಧವಲ್ಲವೆಂದು ವಾದಿಸಬಹುದು. ಇದೂ ಅಕ್ರಮನಿರ್ಬಂಧವೆಂದು ನ್ಯಾಯಾಲಯಗಳು ತೀರ್ಪಿತ್ತಿವೆ. ತನಗೆ ಹಕ್ಕಿರುವ ದಿಕ್ಕಿನಲ್ಲಿ ಹೋಗುವವನೊಬ್ಬನ್ನು ಬೇರೊಂದು ದಿಕ್ಕಿನಲ್ಲಿ ಹೋಗುವಂತೆ ಪ್ರೇರೇಪಿಸಿ ನಿರ್ಬಂಧಿಸಿದರೆ ಆಗ ಅದು ಅಕ್ರಮನಿರ್ಬಂಧವಾಗುತ್ತದೆ.

	ಒಟ್ಟಿನಲ್ಲಿ ಹೇಳುವುದಾದರೆ ಒಬ್ಬನ ವ್ಯಕ್ತಿಸ್ವಾತಂತ್ರ್ಯವನ್ನು ಮೊಟಕುಮಾಡುವ ಯಾವುದೇ ರೀತಿಯ ನಿರ್ಬಂಧವಾದರೂ ಅದು ಅಕ್ರಮನಿರ್ಬಂಧವಾಗುತ್ತದೆ.
(ಕೆ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ